Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಿಂದ ದ್ವೇಷ ರಾಜಕಾರಣ: ಸಿ.ಕೆ.ರಾಮಮೂರ್ತಿ

CK Ramamurthy

Krishnaveni K

ಬೆಂಗಳೂರು , ಶುಕ್ರವಾರ, 18 ಜುಲೈ 2025 (16:27 IST)
ಬೆಂಗಳೂರು: ಬಿಜೆಪಿ ಹಿಂದುಳಿದ ವರ್ಗಗಳ ನಾಯಕ ಬೈರತಿ ಬಸವರಾಜು ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ಟೀಕಿಸಿದರು.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಶಾಸಕರು ಧ್ವನಿ ಎತ್ತಿದರೆ ಅವರನ್ನು ಹುಟ್ಟಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೈರತಿ ಬಸವರಾಜು, ಸಿ.ಟಿ. ರವಿ, ಪ್ರಭು ಚೌಹಾಣ್, ಎನ್. ರವಿಕುಮಾರ್, ಮುನಿರತ್ನ, ಹರೀಶ್ ಪೂಂಜಾ ಇನ್ನು ಹಲವಾರು ಬಿಜೆಪಿ ನಾಯಕರನ್ನು ಯಾವುದೋ ಒಂದು ನೆಪಒಡ್ಡಿ ಸಿಲುಕಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು. 
ಕೆ.ಆರ್.ಪುರದಲ್ಲಿ ಒಬ್ಬ ರೌಡಿಶೀಟರ್ ಹತ್ಯೆಯಾಗಿದೆ. ಹತ್ಯೆಯಾದ ಕುಟುಂಬಕ್ಕೆ ನ್ಯಾಯಕೊಡಿಸಲು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ತಕರಾರು ಇಲ್ಲ. ಹತ್ಯೆಯಾದ ಯುವಕನ ತಾಯಿ ಕೊಲೆಯ ದೃಶ್ಯವನ್ನು ನೋಡಿದ್ದಾರೆ. ಆ ಸಂದರ್ಭದಲ್ಲಿ ಬೈರತಿ ಬಸವರಾಜು ಇದ್ದರು ಎಂದು ಹೇಳಿಕೆ ಕೊಟ್ಟ ಆಧಾರದ ಮೇಲೆ ಶಾಸಕರಾದ ಬೈರತಿ ಬಸವರಾಜು ಅವರನ್ನು ಕೊಲೆ ಪ್ರಕರಣದ ಎಫ್‍ಐಆರ್‍ನಲ್ಲಿ ಎ-5 ಆಗಿ ನಮೂದು ಮಾಡಿದ್ದಾರೆ. ಆದರೆ ಹತ್ಯೆಯಾದ ತಾಯಿ ನಾನು ಬೈರತಿ ಬಸವರಾಜು ಅವರ ಹೆಸರನ್ನು ಹೇಳಲಿಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದ್ದರು. ಅವರನ್ನು ತನಿಖೆ ನೆಪದಲ್ಲಿ ಐದನೇ ಆರೋಪಿಯಾಗಿ ಎಫ್‍ಐಆರ್ ನಮೂದಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಶಾಸಕರನ್ನು ಭೇಟಿ ಮಾಡಲು ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರು ಬಂದು ಹಾರೈಸುತ್ತಾರೆ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅದೇ ರೀತಿ ಕಾಂಗ್ರೆಸ್ ನಾಯಕರ ಜೊತೆ ಅನೇಕ ರೌಡಿ ಶೀಟರ್‍ಗಳು ಮತ್ತು ಇಂದು ಡ್ರಗ್ಸ್ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಪ್ರಿಯಾಂಕ ಖರ್ಗೆ ಅವರ ಆಪ್ತ ಅವರು ಫೋಟೋವನ್ನು ತೆಗೆಸಿಕೊಂಡಾಕ್ಷಣಕ್ಕೆ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಬೈರತಿ ಬಸವರಾಜು ಅವರು ಧ್ವನಿ ಎತ್ತಬಾರದು ಎಂದು ಅವರನ್ನು ಈ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಸಿದ್ದಾರೆ ಎಂದು ಆರೋಪಿಸಿದರು.
 
ಶಾಸಕನಿಗೆ ಮತ್ತು ಸಾಮಾನ್ಯ ಜನರಿಗೆ ಒಂದೇ ಕಾನೂನು. ತನಿಖೆ ನೆಪದಲ್ಲಿ ಬೈರತಿ ಬಸವರಾಜು ಅವರನ್ನು ಹಿಂಸಿಸುವುದು ಎಷ್ಟು ಸರಿ. ಇಂದು ಗೃಹ ಇಲಾಖೆಯು ಪೊಲೀಸ್ ಅಧಿಕಾರಿಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸಿ ಆರೋಪದ ಪ್ರಾಥಮಿಕ ತನಿಖೆ ನಡೆಸದೆ ಎಫ್‍ಐಆರ್ ಹಾಕಿ ಬಿಜೆಪಿ ನಾಯಕರನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಆಕ್ಷೇಪಿಸಿದರು.

ಬಿಜೆಪಿ ಶಾಸಕರನ್ನು ಅವಮಾನ ಮಾಡುವುದು, ಕೇಸಿನಲ್ಲಿ ಸಿಕ್ಕಿಸುವಂತ ಕೆಲಸವನ್ನು ಮಾಡುವುದು ಸರಿಯಲ್ಲ ಎಂದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ನವರು ಸಿಲುಕಿಕೊಂಡಾಗ ಅವರನ್ನು ಪೊಲೀಸ್ ಅಧಿಕಾರಿಗಳು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆಯೇ?. ಕಾಂಗ್ರೆಸ್ ಪಕ್ಷಕ್ಕೆ ಒಂದು ಕಾನೂನು ಬಿಜೆಪಿಗೆ ಒಂದು ಕಾನೂನು ಮಾಡುತ್ತೀರ ಎಂದು ಪ್ರಶ್ನಿಸಿದರು. ಗೃಹ ಮಂತ್ರಿಗಳು ಇದಕ್ಕೆ ಉತ್ತರವನ್ನು ಕೊಡಬೇಕು ಎಂದು ಅವರು ಆಗ್ರಹಿಸಿದರು.
 
ಕಾಂಗ್ರೆಸ್ ಪಕ್ಷದ ನಾಯಕರು ಎಷ್ಟು ಜನ ಆರೋಪದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ, ಎಷ್ಟು ಜನ ಕಾಂಗ್ರೆಸ್ ನಾಯಕರ ಮತ್ತು ಮಂತ್ರಿಗಳ ಹೆಸರುಗಳನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರನ್ನು ಪೊಲೀಸ್ ಠಾಣೆಗೆ ಕರೆಸಿದ್ದೀರ? ಯಾರನ್ನು ನೀವು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಮಂತ್ರಿಗಳಿಗೆ ನೈತಿಕತೆ ಇದ್ದರೆÉ ಡ್ರಗ್ಸ್ ಕೇಸಿನಲ್ಲಿ ಸಿಲುಕಿಕೊಂಡಿದ್ದ ಕಾಂಗ್ರೆಸ್ ನಾಯಕನನ್ನು ಮತ್ತು ಅವನ ಆಪ್ತರಾದ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. 

ಬಿಜೆಪಿ ಕಾರ್ಯಕರ್ತರನ್ನು ಸಿಕ್ಕ ಸಿಕ್ಕಲ್ಲಿ ರೌಡಿ ಶೀಟರನ್ನಾಗಿ ಮಾಡುವುದು, ಹರೀಶ್ ಪೂಂಜ ಅವರು ಹಿಂದು ಸಂಘಟನೆಯ ಬಗ್ಗೆ ಹೋರಾಡಿದರೆ ಅವರನ್ನು ಕೂಡ ಮಟ್ಟಹಾಕುವಂತದ್ದು, ಗಡಿಪಾರು ಮಾಡುವಂತದ್ದು ಇದೆಲ್ಲವು ಕೂಡ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸವನ್ನು ನಿಮ್ಮ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಜನ ನಿಮಗೆ ಅಭಿವೃದ್ಧಿ ಕೆಲಸವನ್ನು ಮಾಡಲು ಅಧಿಕಾರವನ್ನು ಕೊಟ್ಟಿದ್ದಾರೆ. ದ್ವೇಷದ ರಾಜಕಾರಣ ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ತಿಳಿಸಿದರು. ಬೈರತಿ ಬಸವರಾಜು ಅವರ ಮೇಲೆ ಮಾಡುತ್ತಿರುವ ಆರೋಪವು ಅಕ್ಷಮ್ಯ ಅಪರಾಧ. ಇದರ ವಿರುದ್ಧ ನಾವು ಕಾನೂನಿನ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು. 
 
ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ – ಎಸ್. ಹರೀಶ್
ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ನೀಡುತ್ತಿದೆ. ವಿರೋಧ ಪಕ್ಷದ ಶಾಸಕರು ಹೆಸರು ಬಂದರೆ ಅವರ ಮೇಲೆ ಎಫ್‍ಐಆರ್ ಹಾಕಲು ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಪೊಲೀಸ್ ಅಧಿಕಾರಿಗಳಿಗೆ, ಅತೀ ಉತ್ಸಾಹ ಎಂದು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಟೀಕಿಸಿದರು. 
ಕ್ಯಾಬಿನೆಟ್ ಸ್ಥಾನವನ್ನು ನೀಡಿರುವ ವಿನಯ್ ಕುಲಕರ್ಣಿ ಅವರು ಇಂದು ಕೊಲೆ ಸಂಚಿನ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರದ ಆರೋ¥ ಮಾಡಿದ್ದರು, ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ; ವಿನಯ್ ಕುಲಕರ್ಣಿ ಜೈಲಿಗೆ ಹೋಗಿದ್ದು, ಅವರಿಗೆ ನೀಡಿರುವ ಕ್ಯಾಬಿನೆಟ್ ಸ್ಥಾನವನ್ನು ನೀವು ಹಿಂಪಡೆದಿದ್ದೀರ ಎಂದು ಪ್ರಶ್ನಿಸಿದರು. 
 
ಒಬ್ಬ ಪೊಲೀಸ್ ಅಧಿಕಾರಿ ಕಾಂಗ್ರೆಸ್ಸಿನ ಶಾಸಕ ಮತ್ತು ಅವರ ಮಗನ ಹೆಸರು ಹೇಳಿ ಸತ್ತರು. ಇವತ್ತಿನವರೆಗು ಆ ಶಾಸಕ ಮತ್ತು ಮಗನ ಮೇಲೆ ಯಾವ ಕ್ರಮಕೈಗೊಂಡಿದ್ದೀರ; ಶಾಸಕ ಮತ್ತು ಮಗನು ಕಾನೂನಿಗೆ ಒಳಪಡುವುದಿಲ್ಲÀವೇ; ಬೆಳಗಾವಿಯಲ್ಲಿ ಒಬ್ಬ ಸರ್ಕಾರಿ ಅಧಿಕಾರಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ತಮ್ಮನ ಹೆಸರು ಬರೆದಿಟ್ಟು ಸತ್ತರು. ಅವರಿಬ್ಬರನ್ನು ಎಫ್‍ಐಆರ್ ಹಾಕಿ ಬಂಧಿಸಿದ್ದೀರ ಅಥವಾ ಕ್ರಮಕೈಗೊಂಡಿದ್ದೀರ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರಿಗೆ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಮೇಲೆ ಗೌರವವಿದೆ. ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
 
ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು ಬಿಜೆಪಿ ನಾಯಕರಿಗೆ ಒಂದು ಕಾನೂನು ನಡೆಯಬಾರದು. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

10 ವರ್ಷದಿಂದ ವಾದ್ರಾರನ್ನು ಕೇಂದ್ರದ ಬಿಜೆಪಿ ಟಾರ್ಗೇಟ್ ಮಾಡಿದೆ: ರಾಹುಲ್ ಗಾಂಧಿ ಆಕ್ರೋಶ